ಭಾಷೆ
ಕನ್ನಡ ಮತ್ತು ತೆಲುಗು

ಕನ್ನಡ ಮತ್ತು ತೆಲುಗುಗಳು ಬಹಳ ಮುಖ್ಯವಾದ ದ್ರಾವಿಡ ಭಾಷೆಗಳಲ್ಲಿ ಎರಡು. ಕನ್ನಡವು ದಕ್ಷಿಣ ದ್ರಾವಿಡ ಭಾಷೆಗಳ ಗುಂಪಿಗೆ ಸೇರಿದರೆ, ತೆಲುಗನ್ನು ದಕ್ಷಿಣ-ಮಧ್ಯ ದ್ರಾವಿಡ ಭಾಷೆಗಳ ಸಂಗಡ ವರ್ಗೀಕರಿಸಲಾಗಿದೆ. ಆದರೆ, ಈ ಭಾಷೆಗಳು ಕರ್ನಾಟಕ ಮತ್ತು ಆಂಧ್ರಪ್ರದೇಶದದ ಅನೇಕ ಭಾಗಗಳಲ್ಲಿ ಭೌಗೋಳಿಕ ಮತ್ತು ಚಾರಿತ್ರಿಕ ಕಾರಣಗಳಿಂದ ಒಂದುಗೂಡಿವೆ. ಬೀದರ್, ರಾಯಚೂರು, ಗುಲ್ಬರ್ಗ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಕೋಲಾರ, ಅನಂತಪುರ, ಕಡಪಾ ಹಾಗೂ ಕರ್ನೂಲು ಜಿಲ್ಲೆಗಳು ಕನ್ನಡ ಮತ್ತು ತೆಲುಗು ರಾಜ್ಯಗಳಲ್ಲಿ ಚಲನವಲನ ಮಾಡಿವೆ. ಕೆಲವೊಮ್ಮೆ ಆ ಪ್ರದೇಶಗಳನ್ನು ಇವೆರಡೂ ಭಾಷಾವರ್ಗಗಳಿಗೆ ಸೇರದ ಮುಸ್ಲಿಂ ದೊರೆಗಳು ಆಳುತ್ತಿದ್ದರು. ಚಾಳುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ ಮುಂತಾದ ರಾಜವಂಶಗಳು ತಮ್ಮ ಇತಿಹಾಸದ ಬೇರೆ ಬೇರೆ ಘಟ್ಟಗಳಲ್ಲಿ ಕನ್ನಡ ಮತ್ತು ತೆಲುಗುಗಳನ್ನು ಮಾತನಾಡುವ ಅಂತೆಯೇ ದ್ವಿಭಾಷಿಕರಿಂದ ತುಂಬಿದ ವಿಶಾಲ ಭೂಪ್ರದೇಶಗಳ ಮೇಲೆ ಆಳ್ವಿಕೆ ನಡೆಸಿವೆ. ಆದ್ದರಿಂದಲೇ ಕರ್ನಾಟಕದ ತುಂಬಾ ತೆಲುಗು-ಕನ್ನಡ ದ್ವಿಭಾಷಿಕರು ಹರಡಿಕೊಂಡಿದ್ದಾರೆ. ಈ ಪ್ರದೇಶಗಳಲ್ಲಿ ವಾಸಮಾಡುವ ಅನೇಕರ ತಾಯಿನುಡಿಯು ತೆಲುಗೇ ಆದರೂ ಅವರು ಶೈಕ್ಷಣಿಕ ವಿಷಯಗಳಲ್ಲಿ ಸಾಮಾನ್ಯವಾಗಿ ಕನ್ನಡವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕರ್ನಾಟಕದ ಏಕೀಕರಣವಾದ ಮೇಲಂತೂ ಈ ಮಾತು ಇನ್ನಷ್ಟು ನಿಜ. ಕರ್ನಾಟಕದ ಅನೇಕ ಊರುಗಳಲ್ಲಿ ತೆಲುಗು ಪ್ರಾದೇಶಿಕ ಭಾಷೆಯಂತೆಯೇ ಬಳಕೆಯಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಕನ್ನಡ ಮತ್ತು ತೆಲುಗುಗಳ ಬಳಕೆಯು ಸಾಮಾಜಿಕ ಶ್ರೇಣೀಕರಣದ ಸಂಕೇತವೂ ಆಗಿದೆ. ತೆಲುಗು ಭಾಷಿಕರು ತಮ್ಮ ಭಾಷೆಯ ಬಗ್ಗೆ ಯಾವುದೇ ರೀತಿಯ ಕೀಳರಿಮೆಯನ್ನು ಹೊಂದದಿದ್ದರೂ ಅನೇಕ ಪ್ರದೇಶಗಳಲ್ಲಿ ಕ್ರಮೇಣ ಕನ್ನಡವು ಮೇಲುಗೈ ಪಡೆಯುತ್ತಿದೆ. ದ್ರಾವಿಡ ಭಾಷೆಗಳನ್ನು ಕುರಿತ ತಮ್ಮ ಪುಸ್ತಕದಲ್ಲಿ, ಹಿರಿಯ ಭಾಷಾವಿಜ್ಞಾನಿಯಾದ ಭ. ಕೃಷ್ಣಮೂರ್ತಿಯವರು ಕನ್ನಡ ಮತ್ತು ತೆಲುಗುಗಳ ಸಂಬಂಧವನ್ನು ಸೂಕ್ತವಾದ ಚಾರಿತ್ರಿಕ ಚೌಕಟ್ಟಿನಲ್ಲಿ ಇಡುತ್ತಾರೆ: “ತೆಲುಗು ಭಾಷೆಯು, ವಾಂಶಿಕವಾದ ನೆಲೆಯಲ್ಲಿ ಉತ್ತರ ಭಾರತದ ಅನೇಕ ಭಾಷೆಗಳಿಗೆ ನಿಕಟವಾಗಿದ್ದರೂ ಸಾಹಿತ್ಯಕ ಭಾಷೆಯಾಗಿ ಕನ್ನಡದ ಸಂಗಡ ವಿಪುಲವಾದ ಕೊಳುಕೊಡೆಯ ಸಂಬಂಧವನ್ನು ಹೊಂದಿದೆ. ಲಿಪಿಯ ವಿಕಾಸದ ನೆಲೆಯಲ್ಲಿಯೂ ಅವೆರಡಕ್ಕೂ ಸಮಾನವಾದ ತೆಲುಗು-ಕನ್ನಡ ಲಿಪಿಯು ಏಳನೆಯ ಶತಮಾನದಿಂದ ಹದಿಮೂರನೆಯ ಶತಮಾನದವರಗೆ ಬಳಕೆಯಲ್ಲಿತ್ತು. ತೆಲುಗು ಮತ್ತು ಕನ್ನಡಗಳೆರಡರಲ್ಲೂ ಕೃತಿರಚನೆ ಮಾಡಿದ ಅನೇಕ ಶೈವ ಕವಿಗಳಿದ್ದಾರೆ. ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಯಾಗಿದ್ದ ಕೃಷ್ಣದೇವರಾಯನು ಕನ್ನಡ ಮತ್ತು ತೆಲುಗು ಕಾವ್ಯಗಳನ್ನು ಪ್ರೋತ್ಸಾಹಿಸಿದನು. ಇದೆಲ್ಲದರ ಫಲವಾಗಿ, ಶಬ್ದಕೋಶದ ನೆಲೆಯಲ್ಲಿ ಈ ಭಾಷೆಗಳ ನಡುವೆ ಬಹಳ ವ್ಯಾಪಕವಾದ ವಿನಿಮಯವು ನಡೆಯಿತು (‘The Dravidian Languages’, 2003, Cambridge University Press, Page 23-24) ಪಾಲ್ಕುರಿಕೆ ಸೋಮನಾಥ, ಶ್ರೀನಾಥ, ಕಂಠೀರವ ನರಸರಾಜ, ಮತ್ತು ಕಳಲೆ ವೀರರಾಜರು ಕರ್ನಾಟಕದಲ್ಲಿದ್ದು ಕೃತಿರಚನೆ ಮಾಡಿದ ಕೆಲವು ತೆಲುಗು ಕವಿಗಳು. ಪ್ರಸಿದ್ಧ ಕನ್ನಡ ಕವಿಯಾದ ರಾಘವಾಂಕನು, ಕಾಕತೀಯ ದೊರೆಯಾದ ಪ್ರತಾಪರುದ್ರದೇವನ ಆಸ್ಥಾನಕ್ಕೆ ಹೋಗಿದ್ದನು. (ವಾರಂಗಲ್ಲಿಗೆ)

ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ನಡುವೆ ಸುಮಾರು 1230 ಕಿಲೋಮೀಟರುಗಳಷ್ಟು ದೀರ್ಘವಾದ ಗಡಿಯಿದೆ. ಈ ರಾಜ್ಯಗಳ ನಡುವೆ ದಾಟುವುದೇ ಕಷ್ಟವಾದ ಭೌಗೋಳಿಕ ಅಡಚಣೆಗಳೇನೂ ಇಲ್ಲ. ಇದೆಲ್ಲದರ ಫಲವಾಗಿ, ಈ ಭಾಷಿಕ ಸಮುದಾಯಗಳ ನಡುವೆ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ಸಂಗತಿಗಳ ವಿನಿಮಯವು ಯಾವುದೇ ಅಡೆತಡೆಯಿಲ್ಲದೆ, ಘರ್ಷಣೆಯಿಲ್ಲದೆ ನಡೆದಿದೆ. ಶಬ್ದಕೋಶದ ನೆಲೆಯಲ್ಲಿ ಎರಡೂ ಭಾಷೆಗಳು ಸಂಸ್ಕೃತದಿಂದ ಅಸಂಖ್ಯಾತ ಸಮಾನ ಪದಗಳನ್ನು ಪಡೆದುಕೊಂಡು ಬಳಸುತ್ತಿವೆ. ಸಾಹಿತ್ಯಕೃತಿಗಳಲ್ಲಿ ತತ್ಸಮ ಪದಗಳನ್ನೂ ಅನಕ್ಷರಸ್ಥರಾದ ಜನಸಾಮಾನ್ಯರ ಆಡುಮಾತಿನಲ್ಲಿ ತದ್ಭವ ಪದಗಳನ್ನೂ ಬಳಸುವ ಪ್ರವೃತ್ತಿಯನ್ನು ಎರಡು ಭಾಷೆಗಳಲ್ಲಿಯೂ ಕಾಣಬಹುದೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಇಂತಹುದೇ ಹಂಚಿಕೊಂಡ ಪ್ರಭಾವಗಳನ್ನು ಛಂದಸ್ಸು ಹಾಗೂ ಅಲಂಕಾರಶಾಸ್ತ್ರಗಳ ನೆಲೆಯಲ್ಲಿಯೂ ಕಾಣಬಹುದು. ಎರಡೂ ಭಾಷೆಗಳು ಕಂದಪದ್ಯಗಳು ಮತ್ತು ವೃತ್ತಗಳನನ್ನು ಸಂಸ್ಕೃತದಿಂದ ಎರವಲು ಪಡೆದಿವೆ. ಈ ಭಾಷೆಗಳ ಛಂದೋಗ್ರಂಥಗಳನ್ನು ಗಮನವಿಟ್ಟು ಅಭ್ಯಾಸ ಮಾಡಿದಾಗ, ಇಲ್ಲಿರುವ ಅಂಶಗಣದ ಛಂದೋಬಂಧಗಳು ಅನೇಕ ಮೂಲದ್ರಾವಿಡ ರೂಪಗಳನ್ನು ಕಾಪಾಡಿಕೊಂಡಿವೆಯೆಂಬ ಸಂಗತಿಯು ಗೊತ್ತಾಗುತ್ತದೆ. ಕ್ ಮತ್ತು ಗ್ ಎಂಬ ವ್ಯಂಜನಗಳು ಅನುಕ್ರಮವಾಗಿ ಚ್ ಮತ್ತು ಜ್ ಗಳಾಗಿ ಬದಲಾಗುವ ತಾಲವ್ಯೀಕರಣದ ಪ್ರಕ್ರಿಯೆಯನ್ನು ತೆಲುಗಿನಲ್ಲಿ ನಡೆಯುತ್ತದೆ. ಆದರೆ, ಕನ್ನಡದಲ್ಲಿ ಆ ಪ್ರಕ್ರಿಯೆಯನ್ನು ಕಾಣುವುದು ಬಹಳ ಅಪರೂಪ.ಮತ್ತು ಎಂಬ ಸ್ವರಗಳು ಮತ್ತು ಗಳಾಗಿ ಪರಿವರ್ತನೆಯಾಗುವುದನ್ನು ಎರಡು ಭಾಷಗಳಲ್ಲಿಯೂ ಕಾಣಬಹುದು. ಪಂಪ, ನಾಗಚಂದ್ರ ಮುಂತಾದ ಕನ್ನಡ ಕವಿಗಳ ಹಾಗೂ ತೆಲುಗಿನ ಆದಿಕವಿಯಾದ ನನ್ನಯ್ಯನ ಕಾವ್ಯದಲ್ಲಿ ಅನೇಕ ಸಮಾನವಾದ ಅಥವಾ ಬಹಳ ಹೋಲಿಕೆಯಿರುವ ಪದಗಳನ್ನು ನೋಡಬಹುದು. ನನ್ನಯ್ಯನ ಭಾರತವು ಪಂಪನ ವಿಕ್ರಮಾರ್ಜುನವಿಜಯಂ ಕಾವ್ಯದಿಂದ ಪ್ರಭಾವಿತವಾಗಿದೆ.

ಡಾ. ಬಿ. ರಾಮಚಂದ್ರರಾವ್ (1984) ಅವರು ಆಂಧ್ರಪ್ರದೇಶ ಮತ್ತು ಕರ್ನಾಟಕಗಳ ನಡುವಿನ ಗಡಿಪ್ರದೇಶಗಳ ಭಾಷಿಕ ಸನ್ನಿವೇಶವನ್ನು ತಮ್ಮ ಕೃತಿಯಲ್ಲಿ ವಿವರವಾಗಿ ಅಧ್ಯಯನ ಮಾಡಿದ್ದಾರೆ. ಅವರು ತೆಲುಗಿನ ಪದರಚನೆ ಮತ್ತು ಶಬ್ದಕೋಶಗಳು ಕನ್ನಡದ ಮೇಲೆ ಬೀರಿರುವ ಪ್ರಭಾವವನ್ನು ಚೆನ್ನಾಗಿ ವಿವರಿಸಿದ್ದಾರೆ. ಈ ಭಾಷೆಗಳ ಬಳಕೆಯ ವಿನ್ಯಾಸಗಳನ್ನು ಮಿಶ್ರಣ ಮಾಡಿರುವುದರಿಂದಲೇ ಮೂಡಿಬಂದಿರುವ ಅನೇಕ ಹೊಸ ಪದಗಳು ಮತ್ತು ಪದಗುಚ್ಛಗಳನ್ನು ಅವರು ಪರಿಚಯಿಸಿದ್ದಾರೆ.

ಹೀಗೆ ಕನ್ನಡವು ತೆಲುಗಿನೊಂದಿಗೆ ಸುದೀರ್ಘವಾದ ಸಂಬಂಧವನ್ನು ಹೊಂದಿದೆ. ಅದರಿಂದ ಅನೇಕ ಅಂಶಗಳನ್ನು ಪಡೆದಿದೆ ಮತ್ತು ಅದಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ.

 

ಹೆಚ್ಚಿನ ಓದು ಮತ್ತು ಲಿಂಕುಗಳು:

  1. ‘The Dravidian Languages’ by Bh. Krishnamurti, 2003, Cambridge University Press.
  2. ‘Folk Songs in Telugu and Kannada- A comparative study’, by R.V.S. Sundaram, 1979.
  3. ‘Folk Ramayanas in Telugu and Kannada’ by T.Goplakrishna Rao, 1984.
  4. ‘Sound Change’ by D.N. Shankara Bhat, 2001.
  5. ‘Materials for a sketch of Kannada spoken in Andhrapradesh-Karnataka Border’, by B.Ramachandra Rao, 1984, Hyderabad.
  6. ಕನ್ನಡ ಭಾಷೆಯ ಇತಿಹಾಸ, ಬಿ. ರಾಮಚಂದ್ರ ರಾವ್, 1998, ಡಿ.ವಿ.ಕೆ. ಮೂರ್ತಿ, ಮೈಸೂರು.

ಮುಖಪುಟ / ಭಾಷೆ